Copyright 2012 Jog Management Authority. All rights reserved.
      ಜೋಗ ಜಲಪಾತ
    ಜೋಗ ಅಥವ ಗೇರುಸೊಪ್ಪ ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಅತಿ ಎತ್ತರದ ಜಲಪಾತ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಜೋಗ ಕರ್ನಾಟಕದ ಒಂದು ಪ್ರಮುಖ ಪ್ರವಾಸೀ ತಾಣ. ಇಲ್ಲಿ ಸುಮಾರು 292ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ದುಮುಕುತ್ತದೆ.ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯ೦ತ ರಮಣೀಯ ರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುವುದು.
    ಶರಾವತೀ ನದಿಯ ಜಲಪಾತ  ಗೇರುಸೊಪ್ಪೆ ಎಂದೂ ಪ್ರಸಿದ್ಧ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿ ಮಧ್ಯೆ ಇರುವ ಈ ಜಲಪಾತ ಸಾಗರ ತಾಲ್ಲೂಕಿನ ತಾಳಗುಪ್ಪ ರೈಲು ನಿಲ್ದಾಣಕ್ಕೆ 16 ಕಿಮೀ ದೂರದಲ್ಲಿದೆ. ಜಲಪಾತ ಶಿವಮೊಗ್ಗದಿಂದ 100 ಕಿಮೀ ದೂರದಲ್ಲೂ, ಹೊನ್ನಾವರದಿಂದ 56 ಕಿಮೀ ದೂರದಲ್ಲೂ ಇದೆ.
    ಇಲ್ಲಿ ಶರಾವತಿ ನದಿ 252.7 ಮೀ (829 ಅಡಿ) ಆಳದ ಪ್ರಪಾತಕ್ಕೆ ಧುಮುಕುತ್ತದೆ. ಸೌಂದರ್ಯಪೂರ್ಣ ಔನ್ನತ್ಯದಲ್ಲಿ ಗೇರುಸೊಪ್ಪೆಯನ್ನು ಮೀರಿಸುವ ಜಲಪಾತ ಜಗತ್ತಿನಲ್ಲೆಲ್ಲೂ ಇಲ್ಲ. ಆಲ್ಪ್ಸ್ ಪರ್ವತದಲ್ಲಿರುವ ಸೆರೊಸೊಲಿ (2400 ಅಡಿ), ಎವಾನ್ಸನ್ (1200 ಅಡಿ) ಮತ್ತು ಆರ್ವೆ (1100 ಅಡಿ) ಜೋಗ ಜಲಪಾತಕ್ಕಿಂತ ಎತ್ತರವಾಗಿವೆಯಾದರೂ ಅವುಗಳಲ್ಲಿ ಜೋಗದಷ್ಟು ಜಲಸಮೃದ್ಧಿ ಇಲ್ಲ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕವಾಗಿದ್ದರೂ, ಅದರ ಎತ್ತರ (164 ಅಡಿ) ಗೇರುಸೊಪ್ಪೆಯಷ್ಟು ಇಲ್ಲ. ಶರಾವತಿ ನದಿ ಹರಿದು ಧುಮುಕುವ ಕಮರಿಯ ಬಂಡೆ 250 ಗಜಗಳಷ್ಟು ಉದ್ದವಾಗಿದೆ. ನಾಲ್ಕು ಪ್ರತ್ಯೇಕ ಬಿರುಕುಗಳಿಂದ ನದಿ ರಭಸದಿಂದ ಇಳಿದು ಕಮರಿಗೆ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸುಮಾರು 829 ಅಡಿ ಆಳಕ್ಕೆ ಧುಮುಕುತ್ತದೆ. ರಾಜಾ ಬೀಳುತ್ತಿರುವಂತೆಯೇ ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕಮರಿಗೆ ಬೀಳುತ್ತದೆ. ಮೂರನೆಯ ಜಲಪಾತ ರಾಕೆಟ್ ಬಂಡೆಯ ಮೇಲಿನಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ನಾಲ್ಕನೆಯ ರಾಣಿ ಜಲಪಾತ (ಲೇಡಿ ಬ್ಲಾಂಚೆ) ಬೀಳುವ ರಭಸದಿಂದೇಳುವ ನೊರೆಯಿಂದ ತುಂಬಿ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ.
    ಮಳೆಗಾಲದಲ್ಲಿ ಹೆಚ್ಚು ನೀರು ರಭಸದಿಂದ ಬೀಳುವ ಕಾರಣ ನೀರಿನಿಂದ ಏಳುವ ಧೂಮ ಪ್ರಪಾತವನ್ನು ಆವರಿಸಿದ್ದು ನೀರಿನ ಭೋರ್ಗರೆತದ ಶಬ್ದ ಹೃದಯವನ್ನು ಕಂಪಿಸುವಂತಿರುತ್ತದೆ. ಮಳೆಗಾಲದ ಅನಂತರದ ತಿಂಗಳುಗಳಲ್ಲಿ ನದಿಯ ಪ್ರವಾಹ ಸರಿಯಾದ ಗಾತ್ರದಲ್ಲಿರುವುದರಿಂದ ಜಲಪಾತ ನೋಡಲು ರಮ್ಯವಾಗಿರುತ್ತದೆ. ಜಲಪಾತದ ಪೂರ್ಣ ದೃಶ್ಯವನ್ನು ಶಿವಮೊಗ್ಗ ಗಡಿ ಭಾಗದಿಂದ ನೋಡಬಹುದು. ಜಲಪಾತದ ಬಂಡೆಯ ಅಂಚುಗಳಲ್ಲಿರುವ ಪೊಟರೆಗಳಲ್ಲಿ ಕಾಡು ಪಾರಿವಾಳಗಳು ಮನೆ ಮಾಡಿಕೊಂಡು ಪ್ರಪಾತದ ಬಳಿ ಗುಂಪುಗುಂಪಾಗಿ ಹಾರುತ್ತಿರುತ್ತವೆ. ಸೂರ್ಯಕಿರಣಗಳಿಂದ ಜಲಪಾತದ ದಿನದ ವಿವಿಧ ಕಾಲಗಳಲ್ಲಿ ಕಾಮನ ಬಿಲ್ಲು ಅನೇಕ ವೈವಿಧ್ಯ ತಾಳುತ್ತದೆ. ಜಲಪಾತದ ಏಕತಾನದ ನಾದ ಹತ್ತಿರ ನಿಂತು ಕೇಳುವವರ ಕಿವಿಗಳಿಗೆ ಘನಗರ್ಜನೆಯಂತೆ ಕೇಳಿಸುತ್ತದೆ. ಅದರ ಮೇಘನಾದದ ಗಾಂಭೀರ್ಯ ನಿಸರ್ಗ ಸಂಗೀತದ ಒಂದು ನಿರುಪಮ ಮಾದರಿ. ಮೌನವನ್ನು ಸೀಳುವ ಆ ನಿತ್ಯನಾದವನ್ನು ಆಲಿಸುತ್ತ ನಿಂತವರಿಗೆ ಒಮ್ಮೆ ನಾದಸಮಾಧಿಯನ್ನು ಉಂಟುಮಾಡಬಹುದು. ಜೊತೆಗೆ ಬಿಸಿಲು ಹರಿದಂತೆ ಜಲಧರೆಗಳ ಮೇಲಿನ ಕಾಮನಬಿಲ್ಲುಗಳು ನಿತ್ಯ ನವ್ಯವಾಗಿ ಕಾಣಿಸುವುವು : ಬೆಳದಿಂಗಳ ರಾತ್ರಿಯಲ್ಲೂ ಕಾಮನಬಿಲ್ಲು ಕಾಣಿಸುವುದುಂಟು. ಈ ಜೀವಂತ ಪ್ರವಾಹದ ಸೌಮ್ಯ-ಭೀಕರತೆಗಳ ವರ್ಣನೆ ಮಾತಿಗೆ ನಿಲುಕದ್ದು. ಗೇರುಸೊಪ್ಪೆ ಜಲಪಾತದ ಮಾಹಿತಿಗಳನ್ನು ಸಂಗ್ರಹಿಸಲು ಮಾರ್ಚ್ 1856ರಲ್ಲಿ ಬಂದ ಇಬ್ಬರು ಬ್ರಿಟಿಷ್ ನೌಕಾಧಿಕಾರಿಗಳ ವರದಿಯಂತೆ ಪ್ರಪಾತದ ಆಳ 829 ಅಡಿಗಳು. ಪ್ರಪಾತದ ತಳದಲ್ಲಿ ನದಿ ಕೊರೆದಿರುವ ಮಡುವಿನ ಆಳ 139 ಅಡಿಗಳು. ನದಿಯ ಆಡ್ಡಗಲ ಉತ್ತರ ಕನ್ನಡ ಮತ್ತು ಶಿವಮೊಗ್ಗ ದಂಡೆಗಳ ಮೇಲಿರುವ ಬಂಗಲೆಗಳ ನಡುವೆ 2130 ಅಡಿಗಳು.
    1869ರ ಜನವರಿಯಲ್ಲಿ ಜಲಪಾತ ಪ್ರದೇಶಕ್ಕೆ ಭೇಟಿ ನೀಡಿದ್ದ ಶ್ರೀಮತಿ ಲೂಯಿ ಬ್ರೌನಿಂಗ್ ತಿಳಿಸುವಂತೆ ಆಗ ಶಿವಮೊಗ್ಗ ಜಿಲ್ಲೆಯ ಅಂಚಿನ ಕಡೆ ಜಲಪಾತದ ಸಮೀಪದಲ್ಲಿ ಡೇರೆಯನ್ನು ಹಾಕಲು ಸಹ ಸಾಧ್ಯವಿಲ್ಲದಂತೆ ಒತ್ತಾದ ಕಾಡು ಬೆಳೆದಿತ್ತು. ಈಗ ಜಲಪಾತದ ಎದುರಿಗೆ, ನದೆ ಭೋರ್ಗರೆದು ಸಾಗುವ ಸುಂದರವಾದ ಸ್ಥಳದಲ್ಲಿ ಪ್ರವಾಸಿ ಬಂಗಲೆ, ಉಪಹಾರ ಗೃಹ ಮತ್ತು ಅಂಚೆ ಕಚೇರಿ ಇವೆ. ಅಕ್ಟೋಬರಿನಿಂದ ಫೆಬ್ರವರಿಯವರೆಗೆ ಸಹಸ್ರಾರು ಪ್ರವಾಸಿಗಳು ಜಗತ್ಪ್ರಸಿದ್ಧವಾದ ಈ ಮನೋಹರ ಸ್ಥಳಕ್ಕೆ ಭೇಟಿ ನೀಡುವುದುಂಟು.
ಶರಾವತಿ ನದಿಯು ನಾಲ್ಕು ಹೋಳಾಗಿ ಕಣಿವೆಗೆ ಧುಮುಕುತ್ತದೆ. ನದಿಯ ನಾಲ್ಕೂ ಝರಿಗಳಿಗೆ ಹೆಸರುಗಳಿವೆ, ನೋಡುಗರ ಎಡದಿಂದ ಬಲಕ್ಕೆ ಹಸರುಗಳು ಈ ಕೆಳಗಿನಂತಿವೆ:
                                ರಾಜ: ಈ ಝರಿಯು ರಾಜಗಾಂಭೀರ್ಯದಿಂದ ದುಮುಕುತ್ತದೆ.
                                ರೋರರ್: ಕಲ್ಲು ಬಂಡೆಗಳ ನಡುವಿನಿಂದ ನುಗ್ಗುವ ಈ ಝರಿಯು ಅತಿ ಹೆಚ್ಚಿನ ಶಬ್ದ ಮಾಡುತ್ತದೆ.
                                ರಾಕೆಟ್: ಹೆಚ್ಚಿನ ಪ್ರಮಾಣದ ನೀರು ಸಣ್ಣ ಕಿಂಡಿಯಿಂದ ರಭಸವಾಗಿ ದುಮುಕುತ್ತದೆ.
                                ರಾಣಿ: ಈ ಝರಿಯ ಆಕಾರವು ಹೆಣ್ಣು ನರ್ತಕಿಯ ತಳುಕು-ಬಳುಕಿಗೆ ಹೋಲುತ್ತದೆ.
    ಮಹಾತ್ಮ ಗಾಂಧಿ ಜಲ ವಿದ್ಯುತ್ ಯೊಜನೆ ಜೋಗ ಜಲಪಾತದ ಬಳಿ ಇರುವ ವಿದ್ಯುತ್ ಸ್ಥಾವರ. ಸ್ವಾತಂತ್ರಪೂರ್ವದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಮೊದಲ ಬಾರಿ ಜೋಗಕ್ಕೆ ಭೇಟಿಯಿತ್ತಾಗ ಜೋಗ ಜಲಪಾತವನ್ನು ನೋಡಿ "ಎಂತಹ ವ್ಯರ್ಥ" ಎಂದು ಉದ್ಗರಿಸಿದರಂತೆ. ಅವರ ಈ ಮಾತಿನ ಫಲಶ್ರುತಿ ಈ ಜಲವಿದ್ಯುತ್ ಆಗಾರ. 1930 ದಶಕದ ಪೂರ್ವಭಾಗದಲ್ಲಿ ಮೈಸೂರು ಲೋಕೋಪಯೊಗಿ ಇಲಾಖೆಯಿಂದ ಜಲ ವಿದ್ಯುತ್ ಯೋಜನಾ ಕಾರ್ಯ ಶುರುವಾಯಿತು. ಮೊದಲ ಹಂತದ ಕೆಲಸ 1939ರಲ್ಲಿ ಜೋಗ ಜಲಪಾತದಿಂದ 24 ಕಿ. ಮಿ. ದೂರದಲ್ಲಿರುವ ಹಿರೆಭಾಸ್ಕರ ಎಂಬ ಸ್ಥಳದಲ್ಲಿ ಶುರುವಾಯಿತು. ಮೊದಲು ಕೃಷ್ಣರಾಜೇಂದ್ರ ಜಲವಿದ್ಯುತ್ ಯೋಜನೆಯೆಂದು ಕರೆಯಲ್ಪಡುತಿದ್ದ ಈ ಯೋಜನೆಯನ್ನು ನಂತರ ಮಹಾತ್ಮ ಗಾಂಧಿ ಜಲವಿದ್ಯುತ್ ಯೊಜನೆಯೆಂದು ನಾಮಕರಣ ಮಾಡಲಾಯಿತು. ಫೆಬ್ರುವರಿ 21, 1949ರಲ್ಲಿ ಉದ್ಘಾಟನೆಯಾದ ಈ ವಿದ್ಯುತ್ ಸ್ಥಾವರ 120 ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸುವ ಕ್ಷಮತೆಯನ್ನು ಹೊಂದಿದೆ. ಮೊದಲು ಹಿರೆಭಾಸ್ಕರ ಜಲಾಶಯದಿಂದ ಈ ಯೊಜನೆಗೆ ನೀರಿನ ಸರಬರಾಜಾಗುತ್ತಿತ್ತು, 60ರ ದಶಕದಲ್ಲಿ ಲಿಂಗನಮಕ್ಕಿ ಜಲಾಶಯ ಪ್ರಾರಂಭವಾದ ನಂತರ ಅದೆ ಈ ಯೋಜನೆಗೆ ನೀರಿನ ಮೂಲ.
    ಮಾರ್ಗದರ್ಶನ:  ಆಗಸ್ಟ್-ಡಿಸೆಂಬರ್ ಅವಧಿಯ ಜೋಗ ಜಲಪಾತವನ್ನು ವೀಕ್ಷಿಸಲು ಅತಿಸೂಕ್ತ ಸಮಯ.
                            ಸಾಗರ ನಗರದಿಂದ ಜೋಗವು 30 ಕಿಲೋಮೀಟರ್ ಹಾಗು ಬೆಂಗಳೂರಿನಿಂದ 379 ಕಿಲೋಮೀಟರ್ ದೂರದಲ್ಲಿದೆ.
                            ಬೆಂಗಳೂರಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನಲ್ಲಿ ಸಾಗರ ತಲುಪಿ, ಸಾಗರದಿಂದ ಖಾಸಗಿ ಬಸ್ಸಿನಲ್ಲಿ ಜೋಗ ತಲುಪಬಹುದು.
                            ರೈಲಿನಲ್ಲಿ ಬರುವುದಾದರೆ ಬೆಂಗಳೂರಿನಿಂದ ಶಿವಮೊಗ್ಗ ತಲುಪಿ ಶಿವಮೊಗ್ಗದಿಂದ ಜೋಗಕ್ಕೆ ಬಸ್ಸಿನಲ್ಲಿ ತಲುಪಬಹುದು.
                            ಸಾಗರದಲ್ಲಿ ಉಳಿದು ಕೊಳ್ಳಲು ವ್ಯವಸ್ಥೆ ಇದೆ.
            > ಹೋಟೆಲ್/ಸರ್ಕಾರಿ ವಸತಿ ನಿಲಯಗಳು
            > ಟ್ಯಾಕ್ಸೀಗಳ / ಪ್ರವಾಸಿ ವಾಹನಗಳ ಮಾಹಿತಿ
Web: www.jogfalls.in               e-Mail: jogfalls.jma@gmail.com               Phone: 08183 - 226600, 226601